Ads Google

Friday, January 15, 2016

ಬಡಗಿಯು ಒಡೆಯ

ಬಡಗಿ ಕೆತ್ತುವ ಕಲಾಕೃತಿಯಲಿ
ಚಿತ್ರ ಬಿಡಿಸುವ ಕಲಾವಿದನಿಗೆ
ಕವಿಯ ಕಲ್ಪನೆಗಿಹದು ಪರಿಮಿತಿ
ಕಲೆಯದೆಲ್ಲವು ದೈವದತ್ತವು
             
ಉದಯರವಿಯ ಕಿರಣ ನೋಡಿ
ಪಕ್ಷಿಗಾನದಿಂಪ ಸವಿದು
ಚೆಲುವ ಹೂವ ಕಂಪ ಹೀರಿ
ನಲಿದಾಡುವ ಭ್ರಮರ ಕಂಡು
ತಂಪುಗಾಳಿಸೊಗಸಮಿಂದು
ಸಂತಸದಲಿ ಮನದಣಿಸಿಕೊಳ್ಳಿರೈ

ಗುಂಡಿನ ಗಮ್ಮತ್ತು
   ಗುಂಡದು ಗಂಡಿನ ಗುಂಡಿಗೆ ಗುಂಡು
   ಹೆಂಡತಿ ಹಿಂಡಲು ಹೆಂಡದ ಹುಂಡಿ
   ಪುಂಡನ ಮಂಡೆಯು ಕಂಡಿತು ಗುಂಡಿ

ಬಡಗಿಯು ಬಡಿಯುತ ಬಿಡಿಸಿದ ಬೆಡಗಿಯ
ಮರದಲಿ ಮೆರೆದಳು ಮರವನು ಮರೆತಳು
ಸರಸದ ಸಿರಿಯಲಿ ಸೆರೆತನ ಸರಿದಿರೆ
ಅರಿವಿನ ಅರೆತನ ಅರಿತಳು ಅರಳುತ
ಅರಸನ ಅರಸುತ ಕೋರುತ ಕರೆದಳು

ದೇವರು ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯ ತನ್ನ ಕನಿಷ್ಠಗಳನ್ನ ಮರೆತು ಮೆರೆದ. ಅರಿವಾಗಲವಗೆ ದೈವದ ಶಕ್ತಿ ಬೇಡಿದ ಮುಕ್ತಿ.

ಬಡಗಿ, ಅರಸ = ದೈವ
ಬೆಡಗಿ = ಮಾನವ
ಅರಳುತ = ವಯಸ್ಸು ಕಳೆಯುತ
ಸೆರೆತನ = ಸೆರೆವಾಸ, ಸೆರೆಯಲ್ಲಿರುವ ಭಾಸ
ಸರಿದಿರೆ = ಸಾಗಿರಲು
ಮರದಲಿ = ಸುಂದರ ಮಾಂಸಖಂಡಗಳ ದೇಹದಲ್ಲಿ
ಮರವನು ಮರೆತಳು = ತನ್ನನ್ನು, ತನ್ನತನವನ್ನು, ಇಹವನ್ನು, ಸೃಷ್ಟಿಸಿದವರನ್ನು ಮರೆತ ಮಾನವ

ಗೀಚುವಾಗ ನಾನು ಅರ್ಥೈಸಿಕೊಂಡಂತೆಯೆ ತಮಗೂ ಆಗಲೆಂದು ವಿವರಣೆ ಅಷ್ಟೇ. ..
ಸ್ವಲ್ಪ philosophically heavy ಅನ್ನಿಸಿದರೆ ಕ್ಷಮಿಸಿ. ..
ಗುಂಡಿನ ಗಮ್ಮತ್ತು ಬರೆದ ಲೇಖನಿಯಲೇ ಇದನ್ನೂ ಬರೆದದ್ದು.... ಗುಂಡಿನ ಗಮ್ಮತ್ತಿಲ್ಲದೆ.... ನನ್ನ ಹೆಂಡತಿ ಮಾಡಿದ್ದ ರುಚಿಯಾದ ಹುಗ್ಗಿ ಮತ್ತು ಪೊಂಗಲ್ ಗಮ್ಮತ್ತಿನಿಂದಲೇ ಬರೆದದ್ದು!