ದೇಶಪಾಂಡೆಯವರ (ವಿ.ಕ - ತಾ||07/06/2010) ಬರಹ ಓದಿದಾಗ ನಗಬೇಕೊ ಅಳಬೇಕೊ ತಿಳಿಯಲಿಲ್ಲ. ಅವರ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಅತಿ ಕ್ಲಿಷ್ಟಕರವಾದ ಈ ಸಮಸ್ಯೆಯನ್ನು ತಾವೆ ಮೇಲೆ ಹೇರಿಕೊಂಡದ್ದು ಎಂದರೆ ತಪ್ಪಾಗಲಾರದು.
ಕಾಂಗ್ರೆಸ್ ಪಕ್ಷದ ಸಂವಿಧಾನದಲ್ಲಿ ಕಾರ್ಯಾಧ್ಯಕ್ಷರ ಹುದ್ದೆಗೆ ಅವಕಾಶವಿಲ್ಲ ಎಂದು ಅವರು ಹೇಳಿಕೆ ನೀಡಿದಾಗಲೇ ಅವರು ಡೀಕೇಶಿಯವರಿಗೆ ಸವಾಲು ಹಾಕಿದಂತಾಯಿತು. ಜೊತೆಗೆ
ದೇಶಪಾಂಡೆಯವರು ತಮ್ಮ ಸ್ಥಾನ ಉಳಿಸಿಕೊಳ್ಳಲು "ಅನ್ಯಬಳಕೆ - ದುರ್ಬಳಕೆ"ಗಳ ವ್ಯಾಖ್ಯಾನದಲ್ಲಿ ಬಿದ್ದು ಹೊರಳಾಡಬಹುದು. ಕಾಂಗ್ರೆಸ್ಸಿಗರ ವಿಮಾನಯಾನಕ್ಕೆ, ದಿನಪತ್ರಿಕೆಗಳಲ್ಲಿ ಜಾಹೀರಾತುಗಳಿಗೆ, ವರದಿ ತಯಾರಿಕೆಗೆ, ಕಚೇರಿ ವೆಚ್ಚಕ್ಕೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹಂಚಲು ಟಿ-ಶರ್ಟ್ ಕೊಳ್ಳಲು ಅಥವ ಬಡ್ಡಿಗಳಿಸಲು ಬ್ಯಾಂಕಿನಲ್ಲಿ ಠೇವಣಿ ಇಡಲು, ಜನ ಹಣ ನೀಡಲಿಲ್ಲ. ಕಷ್ಟದಲ್ಲಿದ್ದ ನೆರೆಸಂತ್ರಸ್ತರ ತತ್ ಕ್ಷಣದ ನೆರವಿಗಾಗಿ ಕನ್ನಡಿಗರು ಉದಾರಮನಸ್ಸಿನಿಂದ ವಂತಿಗೆ ನೀಡಿದ್ದರು. ಈ ಸತ್ಕಾರ್ಯಕ್ಕಾಗಿ ಪರಿಹಾರ ನಿಧಿ ವಿನಿಯೋಗವಾಗದಿದ್ದಲ್ಲಿ ಮೂಲ ಸದುದ್ದೇಶ ಸತ್ತುಹೋದಂತೆಯೇ. ಇದು ನಿರ್ವಿವಾದಿತ ಸತ್ಯ. ಕಾಂಗ್ರೆಸ್ ಪಕ್ಷದ ಹೊಲಸು ರಾಜಕಾರಣದಿಂದಲಾದರೂ ಜನರಿಗೆ "ಪರಿಹಾರ ನಿಧಿ ಸಂಗ್ರಹ"ದ ನಾಟಕ ಸದೃಶವಾಗಿ ಮನವರಿಕೆಯಾಗಿದೆ.
ಇಷ್ಟೆಲ್ಲ ತಮ್ಮ ಪಾರದರ್ಶಕತೆ-ಪ್ರಾಮಾಣಿಕತೆಯ ಬಗ್ಗೆ ಉದ್ದುದ್ದ ಬರೆದಿರುವ ದೇಶಪಾಂಡೆಯವರು ೧೯೯೬ರ ಮುಂಚಿನ ತಮ್ಮ ಆಸ್ತಿ ವಿವರ ಬಹಿರಂಗಗೊಳಿಸಲು ಹಿಂಜರಿಯುತ್ತಿರುವುದೇಕೆ? ೧೯೯೬ರಿಂದ ೨೦೦೬ರವರೆಗಿನ ಆಸ್ತಿ ವಿವರ ಎಲ್ಲರಿಗೂ ಗೊತ್ತಿದೆ. ಅದೂ ಚುನಾವಣಾ ಆಯೋಗದ ಕೃಪೆಯಿಂದ. ಆದರೆ, ೧೯೯೬ರ ಹಿಂದಿನ ಆಸ್ತಿಯ ವಿವರ ಸಾರ್ವಜನಿಕರಿಗೆ ಗೊತ್ತಾಗದಂತೆ ನ್ಯಾಯಾಲಯದಿಂದ ತೆಡೆಯಾಜ್ಞೆಯನ್ನು ತಂದಿದ್ದಾರೆ. ಇಲ್ಲಿ ದೇಶಪಾಂಡೆಯವರು ಮುಚ್ಚಿಟ್ಟುಕೊಳ್ಳುವಂತಹುದು ಏನಿರಬಹುದು ? ಎರಡು ದಶಕಗಳ ಆಸ್ತಿವಿವರ ಹೋಲಿಸಿದರೆ ತಮ್ಮ (ಆಸ್ತಿಗಳಿಕೆಯ) ನಿಜವಾದ ಬಣ್ಣ ಹೊರಬೀಳುವುದೆಂದೆ?
ಸ್ವತ: ಶ್ರೀಮಂತರಾದ, ಅಪಾರವಾದ ಆಸ್ತಿ-ಸಂಪತ್ತಿನೊಡೆಯರಾದ ದೇಶಪಾಂಡೆ, ಡೀಕೇಶಿ, ರಾಮಲಿಂಗಾರೆಡ್ಡಿ ಮತ್ತಿತರ ಕಾಂಗ್ರೆಸ್ ನಾಯಕರು ತಮ್ಮ ಸ್ವಂತ ಹಣ ನೀಡದೆ ಭಿಕ್ಷಾಪಾತ್ರೆ ಹಿಡಿದು ಜನರ ಮುಂದೆ ಕೈಚಾಚಿದ್ದೇಕೆ? ಪಕ್ಷದ ಖರ್ಚಿಗೆ ಇವರಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ "ಪರಿಹಾರ ನಿಧಿ"ಯೇ ಬೇಕಿತ್ತೆ?
ಈ ನಾಯಕರು ತಮ್ಮ ಹಣ-ಕಾಸಿನ ವ್ಯವಹಾರವನ್ನು ಒಬ್ಬ ಕೆಳದರ್ಜೆಯ ಕಾರಕೂನನಿಗೆ ಕೊಟ್ಟು ಅವನು ಮುಂದಿಟ್ಟ ಎಲ್ಲಾ ಕಾಗದ ಪತ್ರಗಳಿಗೂ ಹಿಂದೆ ಮುಂದೆ ನೋಡದೆ ಸಹಿ ಹಾಕುವರೆ? ಜನರ ಕಿವಿಮೇಲೆ ಹೂವಿಡುವ ಪ್ರಯತ್ನ ಮಾಡಲು ಇವರಿಗೆ ನಾಚಿಕೆಯಾಗುವುದಲ್ಲವೆ?
ದೇಶಪಾಂಡೆಯವರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಿರುವುದು, ಪ್ರಕರಣವನ್ನು ಮುಚ್ಚಿಹಾಕಲು ಪಡುತ್ತಿರುವ ಪ್ರಯತ್ನ, ನೀಡುತ್ತಿರುವ ಸವಕಲು ಕಾರಣಗಳು ಈ ನಾರುತ್ತಿರುವ "ಪರಿಹಾರ ನಿಧಿ ದುರ್ಬಳಕೆ" ಪ್ರಕರಣದ ಗಬ್ಬುನಾತ ಇನ್ನೂ ಹೆಚ್ಚು ಹರಡುವಂತೆ ಮಾಡಿವೆ. ದೇಶಪಾಂಡೆಯವರು ಸುಮ್ಮನೆ ತಪ್ಪೊಪ್ಪಿಕೊಂಡು ಮನೆಗೆ ಹೋಗುವುದು ಒಳಿತು. ಇರುವ ಅಲ್ಪ-ಸ್ವಲ್ಪ ಮರ್ಯಾದೆಯಾದರೂ ಉಳಿದೀತು.
- ಅ. ಭಾನು
No comments:
Post a Comment