*ಲೌಕಿಕ ಸಂಬಂಧಗಳೆಂದರೆ ಇಷ್ಟೇನಾ?*
ಇಹಲೋಕ.
ಈ ದೇಹ.
ದೇಹಕ್ಕೊಂದು ಆಕಾರ, ಸ್ವರೂಪ.
ಅದಕ್ಕೊಂದು ಹೆಸರು.
ಸಂಬಂಧಗಳು, ನಂಟು, ಗಂಟು.
ಸಿರಿತನ, ಬಡತನ, ರಾಗ ದ್ವೇಷಗಳ ಅಂಟು.
ಪ್ರೀತಿ, ವಾತ್ಸಲ್ಯ, ಮಮತೆ, ವಿಶ್ವಾಸ, ಕಾಳಜಿ, ಗೌರವ, ಕರುಣೆ, ಅನುಕಂಪಗಳ ಆಲಿಂಗನ
ಆಸೆ, ಕೋಪ, ಅಸಹನೆ, ಅಹಂಕಾರ, ಕಾಮ, ಅಸೂಯೆ, ಲೋಭ, ಕ್ರೋಧ, ಮದ ಮತ್ಸರಗಳ ಹೊರೆ.
ದುಗುಡ, ದುಮ್ಮಾನ, ದುಃಖ, ಕ್ಲೇಶ, ಕಷ್ಟಾನಿಷ್ಟಗಳ ವ್ಯೂಹ
ಭೌತಿಕ, ಶಾರೀರಿಕ, ಲೌಕಿಕ (ಧಾರ್ಮಿಕ, ಸಾಮಾಜಿಕ, ಸಾಂಸಾರಿಕ) ಅನಿವಾರ್ಯತೆಗಳ ಸುಳಿಯೊಳಗೆ ಸಿಲುಕಿ ಅತ್ತ ಮುಳುಗದೆ ಇತ್ತ ತೇಲದೆ ಇದ್ದೂ ಇಲ್ಲದಂತೆ, ಬದುಕಿಯೂ ಬಾಳದಂತೆ, ಕೊನೆಗೆ ಎಲ್ಲವನ್ನೂ ತೊರೆದು, ಇಳೆಗೆ ಇಳಿದಂತೆಯೇ ಮೇಲೇರಿ ಹೋಗಿ ಆತ್ಮವಾಗಿ, ಆತ್ಮೀಯರಿಗೆ ಸವಿನೆನಪಾಗಿ ಉಳಿವ ಮಾನವ!
ಆತ್ಮಕ್ಕೆ ಅಳಿವಿಲ್ಲ, ಹೆಸರಿಲ್ಲ, ಗುರುತಿಲ್ಲ, ಆಕಾರವಿಲ್ಲ, ಬಣ್ಣವಿಲ್ಲ, ರೂಪವಿಲ್ಲ, ಗಾತ್ರವಿಲ್ಲ, ಗಂಧವಿಲ್ಲ. ನಾನು-ನನ್ನದು ಎಂಬ ಅಂಟಿಲ್ಲ.
ಆತ್ಮ ಕಾಣಿಸುವುದಿಲ್ಲ, ಮಾತನಾಡುವುದಿಲ್ಲ, ನೀರಲ್ಲಿ ನೆನೆಯುವುದಿಲ್ಲ, ಬಿಸಿಲಲ್ಲಿ ಒಣಗುವುದಿಲ್ಲ, ಬೆಂಕಿಯಲ್ಲಿ ಸುಡುವುದಿಲ್ಲ.......
ಅದು ಯಾವ ಭೌತಿಕ ರೂಪದಲ್ಲಿ ಪುನರ್ಜನ್ಮ ಪಡೆದು ಭೂಮಿಗೆ ಬಂದಿದೆಯೋ ಬಲ್ಲವರಿಲ್ಲ!
ಹೀಗಿರುವಾಗ ನನ್ನ ನಿಧನಾನಂತರ ಪರಲೋಕದಲ್ಲಿ ನನ್ನ ಪಿತೃಗಳ ಭೇಟಿ, ಒಡನಾಟ ಸಾಧ್ಯವೇ? ಮತ್ತೆ ನಾನವರನ್ನು ಕಾಣುತ್ತೇನೆಯೇ? ಈ ರೀತಿಯ ಆಸೆ ಆಕಾಂಕ್ಷೆಗಳು ಕನಸಾಗಿಯೆ ಉಳಿದು ಬಿಡುತ್ತದೆಯೇ? ಬರೀ ಭ್ರಮೆಯೇ?
ನಾನು-ನನ್ನದು ಎಂಬ ಗುರುತೇ ಇಲ್ಲದಿದ್ದರೆ ಅಲ್ಲಿ ಅರಸುವುದಾದರೂ ಏನನ್ನು?
ಹೀಗಾಗಿ, ಇಹಲೋಕದ ಆಗಿಹೋದ ಅನುಭವ+ಸಂಬಂಧಗಳೆಲ್ಲ ಈಗ ಇಲ್ಲಿ ಸವಿನೆನಪುಗಳಷ್ಟೇ ಅಲ್ವಾ?
No comments:
Post a Comment