Ads Google

Thursday, May 11, 2023

 ಮತದಾನ - ಪ್ರಜಾಪ್ರಭುತ್ವದ ಅಡಿಗಲ್ಲು 


ಒಮ್ಮೆ ದೀರ್ಘವಾಗಿ ಯೋಚಿಸಿ ನೋಡಿ. 

ನಾವೆಲ್ಲ ಸ್ವತಂತ್ರವಾಗಿ ಭಾರತ ದೇಶದಲ್ಲಿ ನಿರಾತಂಕದಿಂದ ಜೀವನ ಸಾಗಿಸುತ್ತಿರುವುದಕ್ಕೆ ಮೂಲ ಕಾರಣ ಪ್ರಜಾಪ್ರಭುತ್ವ. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡುವ ಹಕ್ಕು ನಮಗಿರುವುದರಿಂದಲೇ ಅಲ್ಲವೇ ದೇಶದ ಆಡಳಿತದಲ್ಲಿ ನಾವು ಪಾಲುದಾರರಾಗಿ ಭಾಗವಹಿಸುವ ಅವಕಾಶವಿರುವುದು. ಭಾರತದ ಸುತ್ತ ಮುತ್ತಲಿನ ದೇಶಗಳಲ್ಲಿನ ಪ್ರಕ್ಷೋಭೆ, ಗೊಂದಲ, ವಿವಾದ, ಹಿಂಸೆ, ಅರಾಜಕತೆ, ಆಡಳಿತ ಕುಸಿತ, ಹಣಕಾಸು ವ್ಯವಹಾರಗಳ ಅವ್ಯವಸ್ಥೆ, ಜನರ ಕಷ್ಟದ ಬದುಕು ಎಲ್ಲವನ್ನೂ ಕಾಣ್ತಿದ್ದೀವಿ. ಆದರೆ, ನಮ್ಮ ಭಾರತದಲ್ಲಿ ಎಲ್ಲವೂ ಸುವ್ಯವಸ್ಥಿತವಾಗಿ, ಕಾನೂನಾತ್ಮಕವಾಗಿ, ಸಕ್ರಮವಾಗಿ, ಸುಲಲಿತವಾಗಿ ನಡೆಯುತ್ತಿದೆ. ಅದಕ್ಕೆ ನಾವಾರಿಸಿ ಕಳುಹಿಸಿರುವ ಸಮರ್ಥ ನಾಯಕರೇ ಕಾರಣ. ಅವರಿಗೆ ಬೆಂಬಲವಾಗಿ ನಿಂತಿರುವ ಪ್ರಜ್ಞಾವಂತ, ದೇಶಪ್ರೇಮಿ ಪ್ರಜೆಗಳೇ ಕಾರಣ. ಜನರ ಬೆಂಬಲ, ಸಹಕಾರ, ವಿಶ್ವಾಸ  ಸುಲಭವಾಗಿ ದೊರಕುವುದಿಲ್ಲವೆಂಬ ಅರಿವು ಜನನಾಯಕರಿಗಿರುವುದರಿಂದ ಅವರೂ ಜಾಗರೂಕರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದರಿಂದಲೇ ನಮ್ಮ ಜೀವನ ಸುಗಮವಾಗಿರುವುದು. ಇದಕ್ಕೆಲ್ಲ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಸಮರ್ಪಕ ಅನುಷ್ಠಾನವೇ ಕಾರಣವೆಂದನಿಸುದಿಲ್ಲವೇ? ಈ ಸೌಖ್ಯಕ್ಕಾಗಿ ನಾವು ಪ್ರಜಾಪ್ರಭುತ್ವವನ್ನು ಮತ್ತಷ್ಟು ಸದೃಢವಾಗಿಸುವುದು ನಮ್ಮ ಕರ್ತವ್ಯ ಹಾಗೂ ಹೊಣೆ.

ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಪ್ರಕ್ರಿಯೆ ಚುನಾವಣೆ. ಅದೇ ಪ್ರಜಾಪ್ರಭುತ್ವದ ಅಡಿಪಾಯ. ಚುನಾವಣೆಯಿಲ್ಲದಿದ್ದರೆ ಪ್ರಜಾಪ್ರಭುತ್ವವಿರುವುದಿಲ್ಲ. ಮತದಾನ ಚುನಾವಣೆಯ ಮುಖ್ಯ ಭಾಗ. ಅದಕ್ಕಾಗಿ ಚುನಾವಣಾ ಆಯೋಗ ಮತ್ತು ಸಿಬ್ಬಂದಿವರ್ಗ ಹಗಲುರಾತ್ರಿಯೆನದೆ ಶ್ರಮವಹಿಸಿ ಚುನಾವಣೆ ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆ ಮಾಡ್ತಾರೆ. ಬಹಳಷ್ಟು ಹಣ, ಅಧಿಕಾರಿಗಳ ಪರಿಶ್ರಮ ಮತ್ತು ಅಮೂಲ್ಯವಾದ ಸಮಯ ಇದಕ್ಕಾಗಿ ವ್ಯಯವಾಗುತ್ತದೆ. ಅದು ನಾವೇ ಕಟ್ಟಿರುವ ತೆರಿಗೆಯ ಹಣ. ಹಾಗಾಗಿ, ಚುನಾವಣೆ ಯಶಸ್ವಿಯಾಗಿ ನಡೆದರೆ, ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಮುಗಿದರೆ ಪ್ರಜಾಪ್ರಭುತ್ವದ ನಿರ್ಣಾಯಕ ಘಟ್ಟ ದಾಟಿದಂತೆ. ಹೀಗಾಗಬೇಕಾದರೆ ಮತದಾರರು ಸಂಪೂರ್ಣವಾಗಿ ಸಹಕರಿಸಬೇಕು. ಮತದಾನದ ದಿನ ಎಲ್ಲರೂ ತಪ್ಪದೇ ಬಂದು ತಮ್ಮ ಮತ ಹಾಕಬೇಕು. ನನ್ನ ಒಂದು ಮತದಿಂದ ಏನೂ ವ್ಯತ್ಯಾಸವಾಗದು ಎಂಬ ಸಿನಿಕತೆ, ನಿರಾಕರಣದ ಮನೋಭಾವ ಇರಬಾರದು. ನಮ್ಮ ಒಂದೊಂದು ಮತವೂ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುವ ಅಸ್ತ್ರ. ಆ ಅಸ್ತ್ರದ ಸದುಪಯೋಗವಾಗಬೇಕು. ಅದು ನಮ್ಮ ನಿರಾಸಕ್ತಿಯಿಂದ ನಷ್ಟವಾಗಬಾರದು, ಅಪ್ರಯೋಜಕವಾಗಬಾರದು. ಆ ಕಾಳಜಿ ಮತದಾರರಿಗಿರಬೇಕು. ಸಂವಿಧಾನಾತ್ಮಕವಾಗಿ ನಮಗಿರುವ ಹಕ್ಕುಗಳನ್ನು ಪಡೆದುಕೊಳ್ಳುವ ಅಪೇಕ್ಷೆ ಇದ್ದರೆ ನಮ್ಮ ಮತದಾನದ ಭಾದ್ಯತೆಯನ್ನೂ ನಾವು ಪೂರೈಸಬೇಕು. ಹಕ್ಕು ಮತ್ತು ಜವಾಬ್ದಾರಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಭಾರತದ ನಾಗರೀಕರಾಗಿ ಮತದಾನ ಮಾಡಿ, ತನ್ಮೂಲಕ ಪ್ರಜಾಪ್ರಭುತ್ವ ಸಬಲೀಕರಣದ ನಮ್ಮ ಕರ್ತವ್ಯ ಪೂರೈಸಿದರೆ ನಮ್ಮ ಹಕ್ಕುಗಳಿಗಾಗಿ ಒತ್ತಾಯ ಮಾಡಬಹುದು. ಮತದಾನ ನಮ್ಮ ಹಕ್ಕು ಮತ್ತು ಹೊಣೆ.

ಪ್ರಜಾಪ್ರಭುತ್ವ ಶಕ್ತಿಯುತವಾಗಿರುವಂತೆ ಕಾಯ್ದುಕೊಳ್ಳುವುದು ನಮೆಲ್ಲರ ಭಾದ್ಯತೆ. ಸ್ವಾತಂತ್ರ್ಯ ನಮಗೆ ಶ್ರೀರಕ್ಷೆ. ಪ್ರಜಾಪ್ರಭುತ್ವ ಸ್ವಾತಂತ್ರ್ಯದ ಅವಿಭಾಜ್ಯ ಅಂಗ. ಚುನಾವಣೆ ಪ್ರಜಾಪ್ರಭುತ್ವದ ಅಡಿಗಲ್ಲು. ಅದನ್ನು ಗಟ್ಟಿಗೊಳಿಸುವುದು ನಮ್ಮ ಆದ್ಯ ಕರ್ತವ್ಯ. 

ಪ್ರಜಾಪ್ರಭುತ್ವ ಸಂತಸದ ಮಹೋತ್ಸವ. ಚುನಾವಣಾ ಹಬ್ಬವನ್ನು ಸಡಗರದಿಂದ ಆನಂದದಿಂದ ಸಂಭ್ರಮದಿಂದ ಉತ್ಸಾಹದಿಂದ ಆಚರಿಸಬೇಕು.

ತಪ್ಪದೇ ಎಲ್ಲರೂ ಮತದಾನ ಮಾಡಿ. ಮತದಾನ ಮಾಡದ ಬುದ್ಧಿವಂತನ ಆಯ್ಕೆ ಕೆಟ್ಟ ಸರಕಾರ. ಉತ್ತಮ ಆಡಳಿತಕ್ಕಾಗಿ ಮತದಾನ ಮಾಡಿ. 

The choice of an intelligent non-voter is bad government. 

Vote without fail to ensure good governance.