Ads Google

Sunday, February 12, 2012

An objective comparision of two main characters in Dr.U.R.Anantha Murthy's novel "SAMSKAARA" and Dr.S.L.Bhyrappa's "VAMSHAVRUKSHA"

“ವಂಶವೃಕ್ಷ”ದ ಶ್ರೀನಿವಾಸ ಶ್ರೋತ್ರಿ ಮತ್ತು “ಸಂಸ್ಕಾರ”ದ ಪ್ರಾಣೇಶಾಚಾರ್ಯ – ಒಂದು ಮೌಲ್ಯಕ ತುಲನೆ

ಕನ್ನಡ ಸಾಹಿತ್ಯ ಕ್ಷೇತ್ರದ ಶ್ರೇಷ್ಠ ಕಾದಂಬರಿಕಾರರಾದ ಡಾ||ಎಸ್.ಎಲ್.ಭೈರಪ್ಪನವರ ಕೃತಿ “ವಂಶವೃಕ್ಷ” ಪ್ರಕಟವಾದದ್ದು ೧೯೬೫ರಲ್ಲಿ ಹಾಗೂ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಥಮ ಪ್ರಶಸ್ತಿಯನ್ನು ೧೯೬೬-೬೭ನೇ ವರ್ಷದಲ್ಲಿ ತಂದುಕೊಟ್ಟಿತು. ೧೯೭೨ರಲ್ಲಿ “ವಂಶವೃಕ್ಷ” ಚಲನಚಿತ್ರವಾಗಿ ತೆರೆಕಂಡಿತು. ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತರ ನಿರ್ದೇಶನದಲ್ಲಿ ತಯಾರಾದ ಈ ಚಿತ್ರಕ್ಕೆ “ಶ್ರೇಷ್ಠ ನಿರ್ದೇಶಕ” ರಾಷ್ಠ್ರಪ್ರಶಸ್ತಿ ದೊರೆಯಿತು.

ಕನ್ನಡ ಸಾರಸ್ವತಲೋಕದ ಮತ್ತೊಬ್ಬ ದಿಗ್ಗಜ ಡಾ||ಯು.ಆರ್.ಅನಂತಮೂರ್ತಿಯವರ ಹೆಸರಾಂತ ಕಾದಂಬರಿ “ಸಂಸ್ಕಾರ” ಪ್ರಕಟವಾದದ್ದು ೧೯೬೫ರಲ್ಲಿ. ನವ್ಯ ಸಾಹಿತ್ಯದ ಅಪೂರ್ವ ಕೃತಿ ಎನಿಸಿಕೊಂಡ “ಸಂಸ್ಕಾರ” ಸಾಕಷ್ಟು ವಿವಾದ ಸೃಷ್ಟಿ ಮಾಡಿತು. ೧೯೭೧ರಲ್ಲಿ ಪಟ್ಟಾಭಿರಾಮರೆಡ್ಡಿಯವರ ನಿರ್ದೇಶನದಲ್ಲಿ “ಸಂಸ್ಕಾರ” ಚಲನಚಿತ್ರವಾಗಿ ಬಿಡುಗಡೆಯಾಗಯಿತು. ಗಿರಿಶ್ ಕಾರ್ನಾಡ್ ಮತ್ತು ಸ್ನೇಹಲತಾ ರೆಡ್ಡಿ ಮುಖ್ಯ ಭೂಮಿಕೆಯಲ್ಲಿದ್ದರು. ಕನ್ನಡ ಚಿತ್ರವೊಂದು ಮೊಟ್ಟಮೊದಲ “ಸ್ವರ್ಣಕಮಲ” ರಾಷ್ಠ್ರಪ್ರಶಸ್ತಿ ಪಡೆಯುವಂತಾಯಿತು. ಹೊಸ ಅಲೆಯ ಚಿತ್ರಗಳಿಗೆ ನಾಂದಿಹಾಡಿತು. ಡಾ||ಯು.ಆರ್.ಅನಂತಮೂರ್ತಿ ಅವರ ಕನ್ನಡ ಸಾಹಿತ್ಯ ಸೇವೆಗಾಗಿ (೧೯೯೪ – ಕನ್ನಡಕ್ಕೆ ಆರನೇ) ಅವರಿಗೆ “ಜ್ಞಾನಪೀಠ” ಪ್ರಶಸ್ತಿ ಲಭಿಸಿತು.

ಡಾ||ಎಸ್.ಎಲ್.ಭೈರಪ್ಪನವರ “ಮಂದ್ರ” ಕಾದಂಬರಿ ಕನ್ನಡಕ್ಕೆ ಮೊದಲ ಪ್ರತಿಷ್ಠಿತ “ಸರಸ್ವತಿ ಸಮ್ಮಾನ್” ಪ್ರಶಸ್ತಿ ಗಳಿಸಿಕೊಟ್ಟ ಹೆಗ್ಗಳಿಕೆಗೆ ಪಾತ್ರವಾಯಿತು. ಡಾ||ಭೈರಪ್ಪನವರು ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಿಚ್ಛಿಸದೆ ಮರೆಯಲ್ಲಿದ್ದು ಸಾಹಿತ್ಯಕೃಷಿಯಲ್ಲಿ ತೊಡಗಿಸಿಕೊಂಡು ಅಪಾರ ಜನಮಣ್ಣನೆ ಪಡೆದಿರುವ ಕನ್ನಡದ ಅಪ್ರತಿಮ ಲೇಖಕರು. ಬಲಪಂಥೀಯರೆಂದು, ಆರ್.ಎಸ್.ಎಸ್ ವಕ್ತಾರರೆಂದು ಹಣೆಪಟ್ಟಿ ಕಟ್ಟಿಸಿಕೊಂಡಿರುವ ಡಾ||ಎಸ್.ಎಲ್.ಭೈರಪ್ಪನವರ ಕಾದಂಬರಿಗಳು ಬಹಳ ಜನಪ್ರಿಯವಾಗಿದ್ದು ಬಹುತೇಕ ಎಲ್ಲಾ ಭಾರತೀಯ ಭಾಷೆಗಳಿಗೆ ಹಾಗೂ ಅನೇಕ ವಿದೇಶೀ ಭಾಷೆಗಳಿಗೂ ಅನುವಾದಗೊಂಡಿವೆ. ಡಾ||ಎಸ್.ಎಲ್.ಭೈರಪ್ಪನವರು ೧೯೯೯ರಲ್ಲಿ ಕನಕಪುರದಲ್ಲಿ ನಡೆದ ೬೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಡಾ||ಯು.ಆರ್.ಅನಂತಮೂರ್ತಿಯವರು ಎಲ್ಲೆಡೆಯಲ್ಲೂ ಕಾಣಿಸಿಕೊಳ್ಳುವ ವರ್ಣರಂಜಿತ ವ್ಯಕ್ತಿತ್ವವುಳ್ಳವರು. ರಾಜಕೀಯದಲ್ಲೂ ಕೈಯಾಡಿಸಿರುವ ವಿವಾದಾತ್ಮಕ ಸಾಹಿತಿ. ಲೋಕಸಭೆಗೆ ಸ್ಪರ್ಧಿಸಿ ಸೋತು ನಂತರ ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸಿ ರಾಜಕಾರಣಿಗಳ ಮುಂದೆ ಮತಕ್ಕಾಗಿ ಕೈಚಾಚಿ ತಮ್ಮ ಗೌರವ ಹಾಗೂ “ಜ್ಞಾನಪೀಠ” ಪ್ರಶಸ್ತಿಯ ಘನತೆಯನ್ನು ಮಣ್ಣುಪಾಲು ಮಾಡಿದ ಟೀಕೆಗೆ ಗುರಿಯಾದ ಅಪಖ್ಯಾತಿ ಇವರದ್ದು. ಒಬ್ಬ ಮೇಧಾವಿ, ಪ್ರಬುದ್ಧ ಲೇಖಕ, “ಜ್ಞಾನಪೀಠ” ಪ್ರಶಸ್ತಿ ವಿಜೇತ ಅಂದು ವಿಧಾನ ಸೌಧದ ಮೊಗಸಾಲೆಯಲ್ಲಿ ಭ್ರಷ್ಟ ರಾಜಕಾರಣಿಗಳ (ಯಾರು ಇವರ ಜೀವನದ ಸಾಧನೆಗಾಗಿ ತಲೆಬಾಗಿ ಇವರಿಗೆ ವಂದಿಸಬೇಕಾಗಿತ್ತೊ ಅಂತಹವರ) ಮುಂದೆ ಕೈಜೋಡಿಸಿ ಅವರ ಮತಭಿಕ್ಷೆ ಬೇಡುತ್ತಿದ್ದ ಶೋಚನೀಯ ದೃಶ್ಯ ಜನರಲ್ಲಿ ಬೇಸರ ಮೂಡಿಸಿತ್ತು. “ಜ್ಞಾನಪೀಠ” ಪ್ರಶಸ್ತಿಗೆ ಭಾಜನರಾಗಿ ಸಾಹಿತ್ಯಲೋಕದ ಚಕ್ರವರ್ತಿ ಎನಿಸಿಕೊಂಡ ಮೇಲೂ ಇವರಿಗೆ ಅಧಿಕಾರದಾಹವನ್ನು ಮೆಟ್ಟಿ ನಿಲ್ಲಲ್ಲಿಕ್ಕಾಗಲಿಲ್ಲವಲ್ಲ ಎಂಬ ಜಿಗುಪ್ಸೆ ಕನ್ನಡ ಸಾಹಿತ್ಯಪ್ರಿಯರ ಮನನಾಡಿಗಳಲ್ಲಿ ತುಂಬಿತ್ತು. ಆಸ್ತಿವಂತ ಜಮೀನ್ದಾರರ ವಂಶದಲ್ಲಿ ಹುಟ್ಟಿ ಅನುಕೂಲಸ್ತರಾಗಿದ್ದರೂ, ಎಲ್ಲವನ್ನೂ ತ್ಯಜಿಸಿ ಎಡಪಂಥೀಯ ತತ್ತ್ವ-ಸಿದ್ಧಾಂತಗಳ ಬಗ್ಗೆ ಒಲವು, ಸಮಜವಾದದ ನಿಲುವು ಮುಂದಿಟ್ಟುಕೊಂಡು ಬುದ್ಧಿಜೀವಿಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ೭೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆಸಲ್ಲಿಸಿದ್ದು ಕೇಂದ್ರ ಸರಕಾರ ನೀಡುವ ಗೌರವಾನ್ವಿತ “ಪದ್ಮಭೂಶಣ” ಪ್ರಶಸ್ತಿಯನ್ನು (೧೯೯೮) ಪಡೆದಿದ್ದಾರೆ.

ಇಲ್ಲಿ ನಾವು ಗಮನಿಸಬೇಕಾದ್ದು “ವಂಶವೃಕ್ಷ” ಮತ್ತು “ಸಂಸ್ಕಾರ” ಎರಡೂ ಸಮಕಾಲೀನ ಕಾದಂಬರಿಗಳು ಎಂಬ ಮುಖ್ಯಾಂಶವನ್ನು. ಸರಿಸುಮಾರು ಒಂದೇ ಕಾಲಘಟ್ಟದಲ್ಲಿ ಸಂಭವಿಸಿರಬಹುದಾದ (ಕಾಲ್ಪನಿಕ) ಘಟನೆಗಳ ನಿರೂಪಣೆ ಈ ಕಾದಂಬರಿಗಳಲ್ಲಿ ಕಾಣಬಹುದು. ಎರಡೂ ಕಾದಂಬರಿಗಳು ಚಲನಚಿತ್ರಗಳಾಗಿ ನಿರ್ಮಾಣಗೊಂಡವು ಹಾಗೂ ಎರಡೂ ಚಿತ್ರಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತ ವಿಶೇಷತೆ. ಎರಡೂ ಚಿತ್ರಗಳಲ್ಲಿ ಗಿರೀಶ್ ಕಾರ್ನಾಡ್ ಪಾತ್ರವಹಿಸಿದ್ದು ಹಾಗೂ ಎರಡೂ ಚಿತ್ರಗಳಲ್ಲಿ ಬ್ರಾಹ್ಮಣರ ನಿತ್ಯಜೀವನ, ರೀತಿ-ನೀತಿ, ಶಾಸ್ತ್ರ-ಸಂಪ್ರದಾಯ, ಮಡಿವಂತಿಕೆ, ಆಚಾರ-ವಿಚಾರಗಳ ಪರಿಚಯ ಮಾಡಿರುವಂತಹದ್ದು, ಆದರೆ, ಸಂಸ್ಕಾರದಲ್ಲಿ ಬ್ರಾಹ್ಮಣರ ಅವಹೇಳನ, ವಿಡಂಬನೆ ಮಾಡಲಾಗಿದೆ ಎಂಬ ದೋಷಾರೋಪ ಬಹಳಷ್ಟು ಕೇಳಿಬಂತು.

“ವಂಶವೃಕ್ಷ”ದ ಶ್ರೀನಿವಾಸ ಶ್ರೋತ್ರಿ ಮತ್ತು “ಸಂಸ್ಕಾರ”ದ ಪ್ರಾಣೇಶಾಚಾರ್ಯ ಪ್ರಮುಖ ಪಾತ್ರಗಳು. ಇಬ್ಬರೂ ಸಂಸ್ಕೃತ ಪಂಡಿತರು, ವೇದ-ಶಾಸ್ತ್ರ ಪಾರಂಗತರು, ಸಾತ್ವಿಕರು, ಜ್ಞಾನಿಗಳು, ವೈದಿಕ ಸಂಪ್ರದಾಯಸ್ತ ಬ್ರಾಹ್ಮಣ ಮನೆತನದವರು. ಶಾಸ್ತ್ರ, ವೇದ, ಉಪನಿಷತ್ತು, ಮೀಮಾಂಸೆ, ಪುರಾಣಗಳನ್ನು ಚೆನ್ನಾಗಿ ಬಲ್ಲವರು. ಸುತ್ತಮುತ್ತಲಿನ ಮನೆಗಳಲ್ಲಿ, ಹಳ್ಳಿಗಳಲ್ಲಿ ಪೌರೋಹಿತ್ಯ ಮಾಡಿಸುವುದು, ಶಾಸ್ತ್ರಗಳ ವಿವರಣೆ, ವ್ಯಾಖ್ಯಾನ ನೀಡುವುದು, ಧಾರ್ಮಿಕ ಅಥವ ಸಾಂಪ್ರದಾಯಿಕ ವಿಷಯಗಳಲ್ಲಿ ಉದ್ಭವಿಸುವ ಸಮಸ್ಯೆ-ಸಂಶಯಗಳಿಗೆ ಶಾಸ್ತ್ರ-ಸಂಪ್ರದಾಯಗಳ ಚೌಕಟ್ಟಿನೊಳಗೆ ಸಮಂಜಸ ಪರಿಹಾರ ತಿಳಿಸಿ ಮಾರ್ಗದರ್ಶನ ಮಾಡುವ ಸಾಮರ್ಥ್ಯವುಳ್ಳವರು. ನೈತಿಕ ಬದುಕೇ ಜೀವನದ ಸರ್ವಶ್ರೇಷ್ಟ ಗುರಿಯೆಂದು ದೃಢವಾಗಿ ನಂಬಿ ಅದೇ ರೀತಿ ಸನ್ಮಾರ್ಗದಲ್ಲಿ ಬಾಳುವವರು. ದೈವದ ಮೇಲೆ ಅಪಾರ ನಂಬಿಕೆಯುಳ್ಳವರು. ಶ್ರೀನಿವಾಸ ಶ್ರೋತ್ರಿಯ ಧರ್ಮಪತ್ನಿಯ ಹೆಸರು ಭಾಗೀರತಮ್ಮ ಮತ್ತು ಪ್ರಾಣೇಶಾಚಾರ್ಯರ ಹೆಂಡತಿಯ ಹೆಸರೂ ಭಾಗೀರಥಿ. ಇಷ್ಟೆಲ್ಲಾ ಸಾಮರಸ್ಯ, ಸಮನ್ವಯತೆಗಳಿದ್ದರೂ ಎರಡೂ ಪಾತ್ರಗಳನ್ನು ಲೇಖಕರು ಭಿನ್ನ ರೀತಿಯಲ್ಲಿ ಬೆಳಸಿ, ಬಳಸಿಕೊಂಡಿದ್ದಾರೆ.

“ವಂಶವೃಕ್ಷ”ದ ಶ್ರೀನಿವಾಸ ಶ್ರೋತ್ರಿ ಇಹಲೋಕದ ಕಾಮ-ವ್ಯಾಮೋಹಗಳನ್ನು ಜೀವನದ ತಿಕ್ಕಾಟ-ತೊಳಲಾಟದ ನಡುವೆ ಎದುರಿಸಿ ಗೆದ್ದು ನಿಂತು ಕೊನೆಯಲ್ಲಿ ತಮ್ಮ ಜವಾಬ್ದಾರೆಗಳೆಲ್ಲವೂ ಮುಗಿದಂತೆ ಕಂಡಾಗ ಸಂನ್ಯಾಸಿಯಾಗಲು ಹಿಮಾಲಯಕ್ಕೆ ಪರಿಶುದ್ಧರಾಗಿಯೇ ಹೋಗುತ್ತಾರೆ, “ಸಂಸ್ಕಾರ”ದ ಪ್ರಾಣೇಶಾಚಾರ್ಯರು ತಮ್ಮ ಜೀವನದ ತಪಸ್ಸಿನ ಪರೀಕ್ಷೆಯ ಘಟ್ಟದಲ್ಲಿ ಎಡವಿ ಸೋಲುತ್ತಾರೆ, ಹತಾಶರಾಗುತ್ತಾರೆ, ಪಾಪಗೈದ ಭಾವನೆಯಿಂದ ಅಗ್ರಹಾರವನ್ನು ತ್ಯಜಿಸಿ ಹೊರಡುತ್ತಾರೆ. ಡಾ||ಎಸ್.ಎಲ್.ಭೈರಪ್ಪನವರು “ವಂಶವೃಕ್ಷ”ದಲ್ಲಿ ಮುಖ್ಯ ಪಾತ್ರಧಾರಿಯ ಸಾತ್ವಿಕತೆ, ಸಹನೆ ಮತ್ತು ಸಂಕಲ್ಪಗಳಿಗೆ ಚ್ಯುತಿಯಾಗದಂತೆ ಕಾದಂಬರಿಯನ್ನು ರಚಿಸಿದ್ದಾರೆ. “ಸಂಸ್ಕಾರ”ದಲ್ಲಿ ಡಾ||ಯು.ಆರ್.ಅನಂತಮೂರ್ತಿಯವರು ಪ್ರಾಣೇಶಾಚಾರ್ಯರನ್ನು ಮೊದಲು ಆದರ್ಶ ವ್ಯಕ್ತಿಯಾಗಿ ಮೆರೆಸಿದರೂ ನಡುವೆ ವೇಶ್ಯೆ ಚಂದ್ರಿಯ ಮೈಸೋಕಿದಾಗ ಕಾಮತೃಷೆಯನ್ನು ಮೀರಿ ನಿಲ್ಲಲಾರದೆ ಅವರ ಜೀವನದ ತಪಸ್ಸನ್ನು ಭಂಗಗೊಳಿಸಿ ಅವರನ್ನು ದುರ್ಬಲ ಮನಸ್ಸಿನವರಂತೆ ಚಿತ್ರಿಸಿದ್ದಾರೆ. ತಾವು ಮಾಡಿದುದು ಅನ್ಯಾಯವೆಂಬ ಪಾಪಪ್ರಜ್ಞೆ ಪ್ರಾಣೇಶಾಚಾರ್ಯರನ್ನು ಕಡೆಯವರೆಗೂ ಕಾಡುತ್ತದೆ. ಎರಡೂ ಕಾದಂಬರಿಗಳನ್ನು ಓದಿದಾಗ ಮುಖ್ಯ ಪಾತ್ರಗಳಲ್ಲಿನ ಈ ದ್ವಂದ್ವ ಓದುಗರ ಮುಂದೆ ಭೂತದಂತೆ ನಿಲ್ಲುತ್ತದೆ.

“ವಂಶವೃಕ್ಷ”ದ ಶ್ರೀನಿವಾಸ ಶ್ರೋತ್ರಿ, ಅವರ ಪತ್ನಿ ಭಾಗೀರತಮ್ಮ ಮತ್ತು ಅವರ ಮನೆಯ ಕೆಲಸದಾಳು ಲಕ್ಷ್ಮಿ ಒಂದೆಡೆ ಹಾಗೂ “ಸಂಸ್ಕಾರ”ದ ಪ್ರಾಣೇಶಾಚಾರ್ಯ, ಅವರ ಧರ್ಮಪತ್ನಿ ಭಾಗೀರಥಿ ಮತ್ತು ನಾರಣಪ್ಪನ ವೇಶ್ಯೆ ಚಂದ್ರಿಯರ ಪಾತ್ರಗಳನ್ನು ಗಮನಿಸಿದಾಗ ಲೇಖಕರ ಚಿಂತನೆ, ಮನಸ್ಸಿನ ಪಕ್ವತೆ, ಅಂತಃಸತ್ವದ ಹದ ಗೋಚರವಾಗುತ್ತವೆ. ಈ ಪಾತ್ರಗಳ ವರ್ತನೆ, ಅವು ನಡೆದುಕೊಳ್ಳುವ ರೀತಿ, ಅವುಗಳ ಮನಸ್ಸಿನಲ್ಲಿ ಉದ್ಭವವಾಗುವ ಯೋಚನೆಗಳು, ಉದ್ವೇಗಗಳು, ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸುವಾಗ ಕಂಡುಕೊಳ್ಳುವ ದಾರಿಗಳು, ಸರಿ-ತಪ್ಪುಗಳ ವಿಶ್ಲೇಷಣೆ, ಕಥೆಯಲ್ಲಿನ ಅನಿರೀಕ್ಷಿತ ತಿರುವುಗಳು ಎಲ್ಲವೂ ಲೇಖಕರ ಅಂತರಾಳದ ಅನಿಸಿಕೆಗಳ ಕಾರಂಜಿಗಳೆಂದರೆ ಅತಿಶಯೋಕ್ತಿಯಲ್ಲ.

ಶ್ರೀನಿವಾಸ ಶ್ರೋತ್ರಿ ಗೃಹಸ್ಥಾಶ್ರಮದ ಒಳಗಿದ್ದುಕೊಂಡು ಮುಕ್ತಿಮಾರ್ಗವನ್ನರಸುತ್ತ “ಕಮಲದೆಲೆಯ ಮೇಲಿನ ಮಂಜಿನ ಹನಿಯಂತೆ” ಗೃಹಸ್ಥಾಶ್ರಮವನ್ನನುಸರಿಸುತ್ತಾರೆ. ಗೃಹಸ್ಥ ಜೀವನ ನಡೆಸುತ್ತ ವಂಶೋದ್ಧಾರಕ (ನಂಜುಂಡ ಶ್ರೋತ್ರಿ) ಹುಟ್ಟಿದ ಮೇಲೆ ಬ್ರಹ್ಮಚರ್ಯದ ಪಾಲನೆ ಮಾಡುವ ಅನಿವಾರ್ಯತೆ ಮೇಲೆರಗಿ ಬಂದಾಗ ಅವರ ಮಾನಸಿಕ ತಳಮಳ, ದೈಹಿಕ ಅವಸ್ಥೆಗಳ ಚಿತ್ರಣವನ್ನು ಗಮನಿಸೋಣ. ಮೊದಲ ಮಗುವಾದ ನಂತರ ಭಾಗೀರತಮ್ಮ ಮತ್ತೊಂದು ಮಗುವಿಗೆ ಜನ್ಮ ನೀಡಬಾರದೆಂದು ವೈದ್ಯರು ಸಲಹೆ ನೀಡಿದ ಮೇಲೆ, ಪ್ರಕೃತಿಸಹಜವಾದ ದೈಹಿಕ ಪ್ರಕ್ರಿಯೆಗಳಿಂದ ವಂಚಿತರಾದ ಶ್ರೀನಿವಾಸ ಶ್ರೋತ್ರಿ ಸೊರಗಿಹೋಗುತ್ತಾರೆ. ಅವರ ದೈಹಿಕ-ಮಾನಸಿಕ ತಿಣುಕಾಟವನ್ನು ಸೂಕ್ಷ್ಮವಾಗಿ ಗ್ರಹಿಸುವ ಭಾಗೀರತಮ್ಮ, ಮನೆಯ ಕೆಲಸದಾಕೆ ಲಕ್ಷ್ಮಿಯನ್ನು ಒಪ್ಪಿಸಿ ಆಕೆ ಶ್ರೀನಿವಾಸ ಶ್ರೋತ್ರಿಯನ್ನು ದೈಹಿಕವಾಗಿ ಕೂಡುವ, ತನ್ಮೂಲಕ ತನ್ನ ಗಂಡನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆದರೆ, ಶ್ರೀನಿವಾಸ ಶ್ರೋತ್ರಿಯ ಮಾಗಿದ ಮನಸ್ಸು, ಶಿಷ್ಟಾಚಾರಗಳು ಮೇಲುಗೈ ಸಾಧಿಸುತ್ತವೆ. ಆತನ ಅಂತಃಸಾಕ್ಷಿಯ ಮತ್ತು ದೈಹಿಕತೃಷೆಯ ನಡುವಿನ ಸಮರದ ಸರಿಸುಮಾರು ಆರು ಪುಟಗಳಷ್ಟು ಧೀರ್ಘವಾದ ವಿವರಣೆ ಓದುಗರನ್ನು ಸೆರೆಹಿಡಿಯುತ್ತದೆ. ಆ ಕಾಮದ ಸೆಳೆತವನ್ನು ಮೀರಿ ನಿಂತ ಶ್ರೀನಿವಾಸ ಶ್ರೋತ್ರಿ ನಂತರ ಮೊದಲಿನಂತಾಗುತ್ತಾರೆ, ಯೋಗಿಯಾಗುತ್ತಾರೆ. ನಿರ್ಮಲಮನಸ್ಕರಾಗಿ ಜೀವನ್ಮುಖಿಯಾಗುತ್ತಾರೆ.

“ಸಂಸ್ಕಾರ”ದ ಪ್ರಾಣೇಶಾಚಾರ್ಯರು (ಅ)ಬ್ರಾಹ್ಮಣ ನಾರಣಪ್ಪನ ಅಂತ್ಯಕ್ರಿಯೆಯ ವಿಷಯದಲ್ಲಿ ಎದ್ದ ಗೊಂದಲಗಳಿಗೆ ಶಾಸ್ತ್ರಸಮ್ಮತವಾದ ಪರಿಹಾರ ಕಾಣಸಿಗದೆ, ಆಂಜನೇಯನ ಮೇಲಿನ ಅಪಾರ ನಂಬಿಕೆಯಿಂದ ಅಗ್ರಹಾರದ ಹೊರಗಿನ ಕಾಡಿನ ಮಧ್ಯದಲ್ಲಿರುವ ಗುಡಿಗೆ ಹೋಗುತ್ತಾರೆ. ಸ್ಥಿರಚಿತ್ತರಾಗಿ ಮಾರುತಿಯ ಧ್ಯಾನ ಮಾಡುತ್ತ ತಮ್ಮ ಮುಂದೆ ಪೆಡಂಭೂತವಾಗಿ ನಿಂತ ನಾರಣಪ್ಪನ ಅಪರಕರ್ಮದ ಕ್ಲಿಷ್ಟ ಸಮಸ್ಯೆಗೆ ಆಂಜನೇಯನ ಉತ್ತರಕ್ಕಾಗಿ ಮೊರೆಯಿಡುತ್ತಾರೆ. ಅವರ ನಿರೀಕ್ಷೆಯಂತೆ ಮಾರುತಿಯ ಆಶಿರ್ವಾದ ದೊರಕದೆ ಕಂಗಾಲಾಗಿ ಕಾಡಿನಲ್ಲಿ ನಡೆದು ಬರುವಾಗ ಅಲ್ಲಿಯೇ ಮರದಡಿಯಲ್ಲಿದ್ದ ಚಂದ್ರಿ ಅವರ ಕಾಲಿಗೆರಗಿ ನಮಸ್ಕರಿಸುತ್ತಾಳೆ. ಉಪವಾಸದಿಂದ ಬಸವಳಿದ ದೇಹ, ಅವರ ಭಕ್ತಿಗೆ ಒಲಿಯದ ಆಂಜನೇಯ, ಸಮಸ್ಯೆಯಾಗಿಯೇ ಉಳಿದ ನಾರಣಪ್ಪನ ಸಾವು ಎಲ್ಲವೂ ಪ್ರಾಣೇಶಾಚಾರ್ಯರನ್ನು ದುರ್ಬಲಗೊಳಿಸಿರುತ್ತವೆ. ಚಂದ್ರಿಯ ದೇಹಸ್ಪರ್ಶದಿಂದ ಅವರಲ್ಲಿ ಮಿಂಚಿನಸಂಚಾರವಾಗಿ ಕಾಮ ಜಾಗೃತವಾಗಿ ಅವರ ಜೀವನದ ತಪಸ್ಸೆಲ್ಲಾ ಕರಗಿ ಹೋಗುತ್ತದೆ. ಗೃಹಸ್ಥರಾಗಿದ್ದರೂ, ರೋಗಿಷ್ಠ ಧರ್ಮಪತ್ನಿಯ ಸೇವೆಮಾಡುತ್ತ ಸ್ವಇಚ್ಛೆಯಿಂದಲೇ ಬ್ರಹ್ಮಚರ್ಯದ ಪಾಲನೆ ಮಾಡುತ್ತಿದ್ದ ಪ್ರಾಣೇಶಾಚಾರ್ಯರು ಕ್ಷಣಮಾತ್ರದಲ್ಲಿ ಅವರಿಗರಿವಿಲ್ಲದಂತೆಯೇ ಕಾಮೋನ್ಮತ್ತರಾಗಿ ವೇಶ್ಯೆ ಚಂದ್ರಿಯೊಡನೆ ಸೇರಿ ದೇಹದ ದಾಹವನ್ನು ನೀಗಿಸಿಕೊಳ್ಳುತ್ತಾರೆ. ಏನೋ ಮಾಡಲು ಹೋಗಿ ಮತ್ತೇನೋ ಸಂಭವಿಸಿದ ನಂತರ ತಮ್ಮ ತಪ್ಪಿನ (?) ಅರಿವಾಗಿ ಪಾಪಪ್ರಜ್ಞೆ ಅವರನ್ನು ಕಾಡುತ್ತದೆ. ತಮ್ಮ ಮೇಲೆ ಅಗಾಧವಾದ ನಂಬಿಕೆಯಿಟ್ಟಿದ್ದ ಅಗ್ರಹಾರದವರ ಮುಂದೆ ಮತ್ತೆ ತಲೆಯೆತ್ತಿ ನಿಲ್ಲಲಾರದೆ ಪಲಾಯನವಾದಕ್ಕೆ ಶರಣಾಗುತ್ತಾರೆ.

ಪ್ರಾಣೇಶಾಚಾರ್ಯರನ್ನು ಆದರ್ಶ ಪುರುಷನನ್ನಾಗಿ, ನೀತಿವಂತರನ್ನಾಗಿ ಬಿಂಬಿಸಿದ ಅನಂತಮೂರ್ತಿಯವರು ಕ್ಷಣಾರ್ಧದಲ್ಲಿ ಅವರ ಶ್ರೇಷ್ಠ ವ್ಯಕ್ತಿತ್ವವನ್ನು ಛಿದ್ರಗೊಳಿಸುತ್ತಾರೆ. ಒಬ್ಬ ಶಿಲ್ಪಿ ಉತ್ಕೃಷ್ಟವಾದ ಕಾಲಾಕೃತಿಯನ್ನು ಕೆತ್ತಿ ಉದ್ದೇಶಪೂರ್ವಕವಾಗಿಯೇ ಆ ಸುಂದರ ಮೂರ್ತಿಯನ್ನು ಭಗ್ನಗೊಳಿಸುವ ಅಚಾತುರ್ಯವನ್ನು ಕಾದಂಬರಿಯ ರೂಪದಲ್ಲಿ ನಾವು ಸಂಸ್ಕಾರದಲ್ಲಿ ಕಾಣುತ್ತೇವೆ.

ಕಾದಂಬರಿಕಾರನ ಜೀವನಾನುಭವಗಳು ಆತನ ಆಲೋಚನೆಗಳ ಮೇಲೆ, ತತ್ಪರಿಣಾಮ ಆತನ ಕಾದಂಬರಿಯ ಕಥೆಯ ಪಾತ್ರಗಳ, ಸಂದರ್ಭಗಳ ಮೇಲೆ ಛಾಪು ಮೂಡಿಸುವುದು ಸಹಜವೆ. ಪ್ರಖ್ಯಾತ ಕವಿ ಹಾಗೂ ವಿಮರ್ಶಕರಾದ ಡಾ||ಎನ್.ಎಸ್. ಲಕ್ಷ್ಮೀನರಾಯಣ ಭಟ್ಟರು ಹೇಳುವಂತೆ ಒಬ್ಬ ಕವಿಯ ಎಲ್ಲ ಕೃತಿಗಳಲ್ಲೂ ಆತನ/ಆಕೆಯ ಜೀವನದ ತಿರುಳು ಅಡಗಿರುತ್ತದೆ. ತಿಳಿದೊ ತಿಳಿಯದೆಯೋ ತನ್ನ ಕೃತಿಗಳಲ್ಲಿ ತನ್ನ ಅನುಭವಗಳನ್ನು, ಅನಿಸಿಕೆಗಳನ್ನು, ಭಾವನೆಗಳನ್ನು ಕವಿ ಸೇರಿಸಿರುತ್ತಾನೆ. ತನ್ನ ಕವಿತೆಯನ್ನೊ ಲೇಖನವನ್ನೊ ನಂತರ ಯಾವಾಗಲಾದರೊಮ್ಮೆ ನೋಡಿದಾಗ ಹಿಂದೆ ಆ ಕೃತಿಯ ರಚನೆಗೆ ಒದಗಿಬಂದ ಸ್ಫೂರ್ತಿ, ತನ್ನ ಜೀವನದಲ್ಲಿ ಘಟಿಸಿಹೋದ ಸನ್ನಿವೇಶಗಳ, ಕಷ್ಟಗಳ, ಸಂದಿಗ್ಧ ಪರಿಸ್ಥಿತಿಗಳ, ಸವಾಲುಗಳ ನೆನಪು ಕವಿಗೆ ಮೂಡಿಬರುತ್ತದೆ. ಆ ಕಾದಂಬರಿ / ಕವಿತೆ ಆತನ ಜೀವನದ ಒಂದು ಅಂಶವಾಗಿಬಿಟ್ಟಿರುತ್ತದೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡಾ||ಎನ್.ಎಸ್.ಎಲ್ ರವರು ಒಬ್ಬ ಕವಿ ತನ್ನ ರಚನೆಯನ್ನು ಓದಿದಾಗ ಕನ್ನಡಿಯ ಮುಂದೆ ನಿಂತು ತನ್ನ ಪ್ರತಿಬಿಂಬವನ್ನು ನೋಡಿದ ಹಾಗಾಗುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಂತೆಯೇ ಕಾದಂಬರಿಕಾರನ ಕೃತಿಯಲ್ಲಿ ಆತನ ಜೀವನದ ರಸಪಾಕ ಸೇರಿರುತ್ತದೆ. ಹೀಗಿದ್ದಲ್ಲಿ, ಕವಿಯ ಜೀವನಕ್ಕೂ ಆತನ (ಭಾವನಾಲೋಕದ) ರಚನೆಗೂ ಸಂಪೂರ್ಣವಾಗಿಲ್ಲದ್ದಿದ್ದರೂ, ಹತ್ತಿರದ ಭಾವನಾತ್ಮಕವಾದ ಕೊಂಡಿ ಇದ್ದೇ ಇರುತ್ತದೆ. ಅಂದರೆ ಕಾದಂಬರಿಕಾರ ತನ್ನ ಕಥೆಯ ಪಾತ್ರಗಳ ವ್ಯಕ್ತಿತ್ವ, ಶಾರೀರಿಕ-ಮಾನಸಿಕ ಗುಣಲಕ್ಷಣ, ನಡೆವಳಿಕೆ, ಮಾತುಗಳು, ಆಲೋಚನೆಗಳು, ಸಂಬಂಧಗಳು, ಘಟನೆಗಳು ಸಂಭವಿಸುವ ಸ್ಥಳಗಳು, ಪರಿಸರ ಎಲ್ಲಕ್ಕೂ ತನ್ನ ನಿಜಜೀವನದಿಂದ ಎರವಲು ಪಡೆದಿರುತ್ತಾನೆ. ಕಾದಂಬರಿಕಾರ ತನ್ನ ಕೃತಿಯಲ್ಲಿ ತನ್ನ ತಿಳಿವಳಿಕೆಯ ಅಧಾರದ ಮೇಲೆ ತನ್ನ ಅನಿಸಿಕೆಗಳನ್ನು, ಆಲೋಚನೆಗಳನ್ನು ಹರಿದುಬಿಟ್ಟಿರುತ್ತಾನೆ. ಹಾಗಾಗಿ ಆತ ಸೃಷ್ಟಿಸಿದ ಪಾತ್ರಗಳು ನಡೆದುಕೋಳ್ಳುವ ರೀತಿ, ಪಾತ್ರಗಳ ಬೆಳವಣಿಗೆ, ವಿಸ್ತರಣೆ, ಆಡುವ ಮಾತುಗಳು, ಸಂದರ್ಭಗಳು ಇವೆಲ್ಲವೂ ಕವಿಯ ಅಂತರಾಳದಲ್ಲಿ ಅಡಗಿರುವ ಅನುಭವಗಳ, ಭಾವನೆಗಳ ಚಿತ್ರಣವೆಂದರೆ ತಪ್ಪಾಗಲಾರದು. ಹಾಗೆಂದ ಮಾತ್ರಕ್ಕೆ ಎಲ್ಲಾ ಪಾತ್ರಗಳೂ ಸನ್ನಿವೇಶಗಳೂ ಕಾದಂಬರಿಕಾರನ ನಿಜಜೀವನದ ಸ್ಪಂದನೆಯಿಂದ ಉದ್ಭವಿಸಿರಬೇಕೆಂದೇನಿಲ್ಲ. ಒಂದೆರಡು ಮುಖ್ಯ ಪಾತ್ರ-ಪ್ರಸಂಗಗಳ ಬೀಜದಿಂದ ಬೃಹತ್ ವೃಕ್ಷವಾಗಿ ಕಾದಂಬರಿ ಬೆಳೆದಿರಬಹುದು. ಎಲ್ಲೋ ಒಂದೆಡೆ ಕವಿಯ ಜೀವನಾನುಭವಗಳ ಎಳೆ ಆತನ ರಚನೆಗಳಲ್ಲಿ ಸೇರಿರಬೇಕು ಹಾಗೂ ಕವಿಯ ಆ ಸೆಳೆತ ಅವರ ಕಾದಂಬರಿಯಲ್ಲಿ ಅಭಿವ್ಯಕ್ತವಾಗಿರುತ್ತದೆ.

ಕೆಲವು ಕಾದಂಬರಿಕಾರರ ಪ್ರಕಾರ ಕಾದಂಬರಿಕಾರನ ಜೀವನಾನುಭವಗಳಿಗೂ ಕಾದಂಬರಿಯ ವಸ್ತು, ಕಥೆ, ಪಾತ್ರಗಳು, ಮಾತುಗಳು, ಸನ್ನಿವೇಶಗಳಿಗೂ ನಿಕಟ ಸಂಬಂಧವಿರುವುದಿಲ್ಲ, ಇದ್ದರೂ ಅದು ಕಾಕತಾಳೀಯವಷ್ಟೆ. ನಿಜಜೀವನದ ವ್ಯಕ್ತಿ-ಪ್ರಸಂಗಗಳನ್ನು ಕಾದಂಬರಿಯಲ್ಲಿ ಚಿತ್ರಿಸುವಂತಾದರೆ ಕಾದಂಬರಿಕಾರನ ಕಲ್ಪನಾಶಕ್ತಿ, ಸೃಜನಶೀಲತೆಗಳಿಗೆ ಕೆಲಸವಿಲ್ಲ. ಕಾದಂಬರಿಯಲ್ಲಿನ ಪಾತ್ರಗಳಾಡುವ ಮಾತುಗಳು ಕಾದಂಬರಿಯ ಕರ್ತೃವಿನದ್ದಲ್ಲ. ಅಲ್ಲಿನ ಘಟನೆಗಳು, ಮಾತುಗಳು ಕಾದಂಬರಿಯ ಕಥಾವಸ್ತುವಿನ ಆಧಾರದ ಮೇಲೆ ಸಂದರ್ಭೋಚಿತವಾಗಿ ಸಹಜವಾಗಿ ಮೂಡಿಬರುತ್ತವೆ. ಸಾಮಾಜಿಕ ಕಾದಂಬರಿಗೂ ಐತಿಹಾಸಿಕ ಕಾದಂಬರಿಗೂ ಬಹಳ ವ್ಯತ್ಯಾಸವಿರುತ್ತದೆ. ಸಾಮಾಜಿಕ ಕಾದಂಬರಿಗಳಲ್ಲಿ ಲೇಖಕನ ಕಲ್ಪನಾಲಹರಿ ಎಲ್ಲೆಲ್ಲಿ ಬೇಕಾದರೂ ತೇಲಾಡಬಹುದು, ಭಾವನಾಲೋಕದಲ್ಲಿ ವಿಹರಿಸಬಹುದು. ಕಥಾವಸ್ತುವಿಗೆ ಪಾತ್ರಗಳಿಗೆ ಸಹಜತೆಯ, ನೈಜತೆಯ ಲೇಪವಿದ್ದರೆ ಸಾಕು!

ಡಾ||ಎಸ್.ಎಲ್.ಭೈರಪ್ಪನವರು ಮೇಲಿನ ವಿಶ್ಲೇಷಣೆಯನ್ನು ಒಪ್ಪುತ್ತಾರೋ ಇಲ್ಲವೊ ಆದರೆ ಅವರ ಭಿತ್ತಿ ಆತ್ಮಕಥನದ ಮೊದಲಲ್ಲಿ ಅವರೇ ಬರೆದಿದ್ದಾರೆ – “(ನನ್ನ) ಕಾದಂಬರಿಗಳಲ್ಲಿಯೇ ನನ್ನ ಜೀವನದ ಒಳಸತ್ತ್ವವು ವ್ಯಕ್ತವಾಗಿಲ್ಲವೆ? ಅಲ್ಲಿ ವ್ಯಕ್ತವಾಗದ ಯಾವ ಗಹನಭಾವ ಇಲ್ಲಿ (ಅಂದರೆ ಭಿತ್ತಿಯಲ್ಲಿ) ಬರಲು ಸಾಧ್ಯ?”. ಸತ್ಯಶೋಧನೆ ತಮ್ಮ ಸಾಹಿತ್ಯಾನ್ವೇಷೆಣೆಯ ಗುರಿ ಎಂದು ಡಾ||ಎಸ್.ಎಲ್.ಭೈರಪ್ಪನವರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಅವರ ಜೀವನದಲ್ಲಿ ಅವರು ಕಂಡುಕೊಂಡ ಸತ್ಯಗಳನ್ನು ಅವರ ಕಾದಂಬರಿಗಳಲ್ಲಿ ಬಿಂಬಿಸಿದ್ದಾರೆಂದರೆ ತಪ್ಪಾಗಲಾರದು. “ಗೃಹಭಂಗ” ಇದಕ್ಕೆ ಸಾಕ್ಷಿಯಾಗುತ್ತದೆ. “ಸಂಸ್ಕಾರ”ದಲ್ಲಿ ಪ್ರಾಣೇಶಾಚಾರ್ಯರ ಪಾತ್ರಕ್ಕೆ ನಿಜಜೀವನದ ಯಾರಾದರೂ ಸ್ಫೂರ್ತಿಯಾದರೆ ಅಥವಾ ಸಂಪೂರ್ಣವಾಗಿ ಅದು ಕಾಲ್ಪನಿಕ ವ್ಯಕ್ತಿತ್ವವೆ ಎಂದು ಅನಂತಮೂರ್ತಿಯವರೇ ಸ್ಪಷ್ಟಪಡಿಸಬೇಕು. ಪ್ರಾಣೇಶಾಚಾರ್ಯರು ಕಾಲ್ಪನಿಕ ವ್ಯಕ್ತಿಯೇ ಆಗಿದ್ದರೆ ಕಾದಂಬರಿಯಲ್ಲಿನ ನಂಬಲಸಾಧ್ಯವಾದ ಪ್ರಮುಖ ಪಾತ್ರಧಾರಿಯ ಧಿಡೀರ್ ಪರಿವರ್ತನೆ ಅಸಹಜವೆನಿಸುತ್ತದೆ, ಅನಾವಶ್ಯಕವೆನಿಸುತ್ತದೆ. ಕಥೆಯ ತಿರುಳನ್ನೇ ತಿರುಚುವ ಕಾದಂಬರಿಕಾರನ ಮನಃಸ್ಥಿತಿಯ ಬಗ್ಗೆ ಬೇಸರವಾಗುತ್ತದೆ.

ಈ ಹಿನ್ನಲೆಯಲ್ಲಿ ಭೈರಪ್ಪನವರ “ವಂಶವೃಕ್ಷ”ದ ಧೃಡಮನಸ್ಕ ಶ್ರೀನಿವಾಸ ಶ್ರೋತ್ರಿ ಮತ್ತು ಅನಂತಮೂರ್ತಿಯವರ “ಸಂಸ್ಕಾರ”ದ ಭ್ರಮನಿರಸನಗೊಂಡ ಪ್ರಾಣೇಶಾಚಾರ್ಯರ ಪಾತ್ರಗಳನ್ನು ಅವಲೋಕಿಸಿದಾಗ ಕಂಡುಬರುವುದು ಕಾದಂಬರಿಕಾರರ ಮನಸ್ಸಿನ್ನೊಳಗಿನ ತುಡಿತಗಳು, ತುಮುಲಗಳು, ತೊಳಲಾಟಗಳು, ಸಂಘರ್ಷಗಳು, ಸತ್ಯಗಳು! ಇದು ಅವರವರ ಜೀವನಗಳ, ಮನಸ್ಸುಗಳ ಸಂಸ್ಕಾರ, ಪಕ್ವತೆಗೆ ಹಿಡಿದ ಕನ್ನಡಿಯೆ? ಡಾ||ಡಿ.ವಿ.ಜಿಯವರ ಪ್ರಕಾರ ಶ್ರೇಷ್ಟ ಸಾಹಿತ್ಯದ ಗುರಿ ಓದುಗರ ಬದುಕಿನಲ್ಲಿ ಉಲ್ಲಾಸ ಹರಡುವುದು, ಕಷ್ಟಗಳಿಂದ ಆವೃತರಾದವರ ಎದೆಯಲ್ಲಿ ಧೈರ್ಯ ತುಂಬುವುದು, ಉನ್ನತ ಜೀವನಾದರ್ಶಗಳನ್ನು ಪ್ರತ್ಯಕ್ಷಗೊಳಿಸಿ ನಿಲ್ಲಿಸುವುದು. ಉತ್ತಮ ಸಾಹಿತ್ಯದ ಈ ಸರ್ವಕಾಲಿಕ ಮೂರು ಗುಣಲಕ್ಷಣಗಳ ಪರಿಧಿಯಲ್ಲಿ “ಸಂಸ್ಕಾರ”ವನ್ನು ಓದಾಗ ಅದರ ಔನತ್ಯ ಪ್ರಶ್ನೆಯಾಗಿಯೇ ಉಳಿಯುತ್ತದೆ!

1 comment:

  1. ಬಹಳ ಚೆನ್ನಾಗಿ ವಿಮರ್ಶೆ ಮಾಡಿರುವಿರಿ.

    "ವಂಶವೃಕ್ಷ" ಓದಿಸಿಕೊಂಡು ಹೋಗುವುದರಲ್ಲಿ ಅಪ್ರತಿಮ. "ಸಂಸ್ಕಾರ" ಸ್ವಲ್ಪ ಬೋರ್ ಹೊಡೆಯಿತು. ಅನಂತಮೂರ್ತಿಯವರ ಸಣ್ಣ ಕಥೆಗಳು ಇನ್ನ್ನೂ ಚೆನ್ನಾಗಿವೆ. ಶ್ರೀನಿವಾಸ ಶ್ರೋತ್ರಿ ಹಾಗೂ ಪ್ರಾಣೇಶಾಚಾರ್ಯ ಬೇರೆ ಬೇರೆ ತರಹದ ವ್ಯಕ್ತಿಗಳು ಆದ್ದರಿಂದ ಅವರವರ ಗುಣಕ್ಕೆ ತಕ್ಕಂತೆ ಕಥೆಗಳು ಭಿನ್ನವಾಗುವುದರಲ್ಲಿ ತಪ್ಪೇನೂ ಇಲ್ಲ. ಕಾದಂಬರಿಕಾರರು ಅದನ್ನು ಸುಲಭವಾಗಿ ಬೇರೆ ನಿಟ್ಟಿನಲ್ಲಿ ತಿರುಗಿಸಿದರೂ ಕಥೆಗಳ ನೈಜತೆ ಉಳಿಯಬಹುದು. ಇದರಲ್ಲಿ ಸೈದ್ಧಾಂತಿಕ ವೈಪರೀತ್ಯ, ವಿಗ್ರಹ ಭಂಜನ ಇವುಗಳು ಲೇಖಕರ ಉದ್ದೇಶವೋ ಇಲ್ಲವೋ ಎನ್ನುವುದು ಓದುಗನಿಗೆ ಮುಖ್ಯವೇ?

    ReplyDelete